ಕೊರ್ಸುಲ ಮೀನು

ಒಂದು ಬಗೆಯ ಸಿಹಿನೀರಿನ ಮುಲೆಟ್ ಮೀನು. ಪರ್ಸಿಫಾರ್ಮಿಸ್ ಗಣದ ಮುಗಿಲಿಡೆ ಕುಟುಂಬಕ್ಕೆ ಸೇರಿದ ಮೀನು. ವೈಜ್ಞಾನಿಕ ನಾಮ ರೈನೋಮುಗಿಲ್ ಕೊರ್ಸುಲ. ನದೀಮುಖಜ ಪ್ರದೇಶಗಳಲ್ಲಿ ಉಬ್ಬರವಿಳಿತಗಳಿಗೆ ಸಿಗದ ನೀರುಗಳಲ್ಲಿರುತ್ತದೆ. ಸುಮಾರು 45 ಸೆಂ.ಮೀ ಉದ್ದ ಬೆಳೆಯುತ್ತದೆ.  ತಲೆ ಮೇಲಿನಿಂದ ಕೆಳಕ್ಕೆ ಚಪ್ಪಟೆಯಾಗಿದ್ದು ಕಣ್ಣುಗಳು ಮೇಲ್ಭಾಗಕ್ಕೆ ಉಬ್ಬಿದಂತೆ ಕಾಣಿಸುತ್ತವೆ. ಈಜುವಾಗ ಕೆಲವೊಮ್ಮೆ ನೀರಿನ ಮೇಲೆ ಕಣ್ಣುಗಳು ಕಾಣಿಸುತ್ತಿರುತ್ತವೆ. ಆದ್ದರಿಂದ ಇದನ್ನು ನೆತ್ತಿ ಕಣ್ಣಿನ ಕೊರವ ಎಂದು ಕೆರೆಯುತ್ತಾರೆ. ಇವು ಸಮುದ್ರ ಮತ್ತು ಅಳಿವೆಗಳಲ್ಲಿ ವಾಸಿಸುವ ಮುಗಿಲ್ (ಮಾಲಾ ಮೀನು), ವಲಾಮುಗಿಲ್ ಮತ್ತು ಲಿಜಾ (ಪಾರೆ ಮೀನು) ಪ್ರಭೇಧಗಳ ಹತ್ತಿರದ ಸಂಬಂಧಿ. ಪಾಶ್ರ್ವರೇಖೆ ಇರುವುದಿಲ್ಲ. ಹುರುಪೆಗಳು ಸಾಧಾರಣ ಗಾತ್ರದಲ್ಲಿರುತ್ತವೆ. ಎರಡು ಬೆನ್ನು ಈಜುರೆಕ್ಕೆಗಳಿದ್ದು ಮೊದಲನೆಯದಕ್ಕೆ 4 ಮುಳ್ಳುಗಳಿರುತ್ತವೆ. ಕಣ್ಣಗಳು ಹೊಂಬಣ್ಣದವು. ಕರ್ನಾಟಕದ ಕೃಷ್ಣ, ಕಾವೇರಿ, ಮತ್ತು ಗೋದಾವರಿ ನದಿಗಳಲ್ಲಿ ಕಾಣಸಿಗುತ್ತವೆ.
 (ಎನ್.ವಿ.ಎ.; ಟಿ.ಎಸ್.ವಿಶ್ವನಾಥ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ